ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಯಕ್ಷಗಾನದಲ್ಲಿ ಬದಲಾವಣೆ ಕುರಿತು ಸಮಾಲೋಚನಾ ಸಭೆ

ಲೇಖಕರು : ಉದಯವಾಣಿ
ಶುಕ್ರವಾರ, ಜುಲೈ 19 , 2013
`

ಕಾಲಮಿತಿಯ ಯಕ್ಷಗಾನ

ಬೆಳ್ತಂಗಡಿ: ಪರಿವರ್ತನೆ ಸದಾ ಆಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದು ಬದಲಾವಣೆಗಳನ್ನು ನಾವು ಅಪೇಕ್ಷಿಸದಿದ್ದರೂ ಅದಾಗಿ ನಡೆಯುತ್ತಿರುತ್ತದೆ. ಅದಕ್ಕೆ ಹೊಂದಿಕೊಂಡು ಹೇಗೆ ಮುನ್ನಡೆಯುವುದು ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ. ಯಕ್ಷಗಾನದಲ್ಲಿ ಕಾಲಮಿತಿಯನ್ನು ಅಳವಡಿಸಿಕೊಳ್ಳುವ ಕುರಿತು ಎರಡು ತಿಂಗಳಿನಲ್ಲಿ ತೆಂಕು, ಬಡಗಿನ ಎಲ್ಲ ಮೇಳಗಳ ಯಜಮಾನರು, ಸಂಚಾಲಕರ ಸಭೆ ಕರೆದು ಇನ್ನಷ್ಟು ವಿಷಯ ವಿಮರ್ಶೆ ಮಾಡಲಾಗುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಮಂಗಳವಾರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಯಕ್ಷಗಾನದಲ್ಲಿ ಕಾಲಮಿತಿ ಅಳವಡಿಕೆ ಸೇರಿದಂತೆ ಯಕ್ಷಗಾನದ ಬದಲಾವಣೆ ಕುರಿತು ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಮೂಲಸ್ವರೂಪದ ಉಳಿವು ಅಗತ್ಯ

ಯಕ್ಷಗಾನ ಉಳಿಸಲು ಅಂತರಂಗ, ಬಹಿರಂಗ ಬದಲಾವಣೆ ಅವಶ್ಯ. ಐದು ದಿನದ ಕ್ರಿಕೆಟ್‌ ಟೆಸ್ಟ್‌ ಮ್ಯಾಚ್‌ ಕ್ರಮೇಣ ಒಂದು ದಿನ, ಟಿ 20 ಕ್ರಿಕೆಟ್‌ ಇತ್ಯಾದಿ ಬದಲಾವಣೆಗಳು ನಡೆದಂತೆಯೇ ಸಂಪ್ರದಾಯದ ರಕ್ಷಣೆ, ಮೂಲಸ್ವರೂಪ ಉಳಿಸಿಕೊಂಡು ಬದಲಾವಣೆ ಸ್ವೀಕರಿಸುವುದು ಹೇಗೆ ಎನ್ನುವ ಕುರಿತು ಚರ್ಚೆ ನಡೆಯಬೇಕಿದೆ. ಆಧುನಿಕರಿಗೆ ಯಕ್ಷಗಾನದ ಮೇಲೆ ಅಭಿಮಾನ ಇದ್ದರೂ ದೀರ್ಘ‌ಕಾಲ ಕುಳಿತು ಆಸ್ವಾದಿಸುವ ವ್ಯವಧಾನ ಇಲ್ಲ. ನಗರದ ನಿಬಿಡ ಮನೆಗಳ ನಡುವೆ ಧ್ವನಿವರ್ಧಕ ಅಳವಡಿಸಿ ಮುಂಜಾನವರೆಗೆ ನಡೆಸುವಂತಿಲ್ಲ. ಮಧ್ಯರಾತ್ರಿಯ ಬಳಿಕ ಪ್ರೇಕ್ಷಕರ ಕೊರತೆ ಉಂಟಾಗುತ್ತಿದೆ. ಪ್ರದರ್ಶನಕ್ಕೆ ಸ್ಥಳಾಭಾವ ಉಂಟಾಗುತ್ತಿದೆ. ಹಾಗಂತ ಕಲೆಗೆ, ಸಂಪ್ರದಾಯಕ್ಕೆ ಯಾವುದೇ ಅಪಚಾರ ಉಂಟಾಗಬಾರದು ಎಂದು ಅವರು ಹೇಳಿದರು.
ಧರ್ಮಸ್ಥಳದಲ್ಲಿ ಕಾಲಮಿತಿ ಯಕ್ಷಗಾನದ ಕುರಿತು ಡಾ| ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಸಮಾಲೋಚನೆ ನಡೆಯಿತು. ( ಚಿತ್ರ: ಜನನಿ. ಧರ್ಮಸ್ಥಳ )


ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎಲ್‌. ಸಾಮಗ, ಕಾಲಮಿತಿ ಬೇಡ ಎನ್ನುವ ಮನಸ್ಥಿತಿಯ ಬದಲು ಕಾಲಮಿತಿಯಿಂದ ಉಂಟಾಗಬಹುದಾದ ಸಮಸ್ಯೆಗಳಿಗೆ ಪರಿಹಾರ ಹುಡುಕಿದರೆ ಕಾಲಮಿತಿಯ ಪ್ರದರ್ಶನ ಸೀÌಕಾರಾರ್ಹವಾಗುತ್ತದೆ ಎಂದರು.

ಕಟೀಲಿನ ಹರಿನಾರಾಯಣ ಆಸ್ರಣ್ಣ ಅವರು ಕಾಲಮಿತಿಯ ಕುರಿತು ಚಿಂತನೆ ಅಗತ್ಯ. ಭಕ್ತರ ಅಪೇಕ್ಷೆಯಂತೆ ಕಾಲಮಿತಿ ಅಥವಾ ಪೂರ್ಣರಾತ್ರಿ ನಡೆಸಬಹುದು. ಆದರೆ ಏಕಾಏಕಿ ತೀರ್ಮಾನಿಸಲಾಗದು ಎಂದರು.

ಕಾಲಮಿತಿಯ ಅನಿವಾರ್ಯತೆ ಕುರಿತು ಕುಂಬ್ಳೆ ಸುಂದರ ರಾವ್‌, ಡಾ| ಚಂದ್ರಶೇಖರ ದಾಮ್ಲೆ ಸುಳ್ಯ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ, ಉಜಿರೆ ಅಶೋಕ ಭಟ್‌, ಸುರತ್ಕಲ್‌ ರಮೇಶ್‌ ಶ್ರೀಯಾನ್‌, ಡಾ| ಎಂ. ಸುಬ್ಬಣ್ಣ ಗೌಡ, ಕೆ.ಎಚ್‌. ದಾಸಪ್ಪ ರೈ, ಮುರಳಿ ಕಡೆಕಾರ್‌ ಉಡುಪಿ, ಎನ್‌.ಎಸ್‌. ಗೋಖಲೆ, ಮಾಧವ ಶೆಟ್ಟಿ ಬಾಳ, ಉಬರಡ್ಕ ಉಮೇಶ್‌ ಶೆಟ್ಟಿ, ಪ್ರಭಾಕರ ಶಿಶಿಲ ಸುಳ್ಯ, ಸೂರಿಕುಮೇರು ಕೆ. ಗೋವಿಂದ ಭಟ್‌, ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ, ಪದ್ಮನಾಭ ಗೌಡ ಬಿಳಿಮಲೆ, ಪ್ರದೀಪ್‌ ಕುಮಾರ್‌ ಕಲ್ಕೂರ ಮಾತನಾಡಿದರು.

ಸಂಪ್ರದಾಯ ಪ್ರಕಾರವೇ ಇರಲಿ, ಕಾಲಮಿತಿಯ ಆವಶ್ಯಕತೆ ಸದ್ಯಕ್ಕಿಲ್ಲ ಎಂದು ಅಕಾಡೆಮಿ ಸದಸ್ಯ ಸರಪಾಡಿ ಅಶೋಕ ಶೆಟ್ಟಿ, ಯಡೂರು ಮೂರ್ತಿ ಗೌಡ ಶಿವಮೊಗ್ಗ, ಮಲ್ಯಾಡಿ ಶಿವರಾಮ ಶೆಟ್ಟಿ, ಕೃಷ್ಣಪ್ರಕಾಶ್‌ ಬಳ್ಳಂಬೆಟ್ಟು, ಮಾರುತಿಪುರ ಸೋಮೇಗೌಡ ತೀರ್ಥಹಳ್ಳಿ, ಸದಾಶಿವ ಶೆಟ್ಟಿ ಬೋಂದೆಲ್‌, ಕೊಪ್ಪ ಸಹಕಾರ ಸಾರಿಗೆ ಪ್ರತಿನಿಧಿಗಳು, ಶೀನಶೆಟ್ಟಿ ಕೂಳೂರು, ಮಂದಾರ್ತಿ ವಿಠಲ ಶೆಟ್ಟಿ ಅಭಿಪ್ರಾಯ ಸೂಚಿಸಿದರು.

ಚೌಕಟ್ಟು ಅಗತ್ಯ

ವಿಮರ್ಶಕ ಡಾ| ಎಂ. ಪ್ರಭಾಕರ ಜೋಷಿ ಅವರು ಎಲ್ಲ 35 ಮೇಳಗಳೂ ಒಂದೆಡೆ ಸೇರಿ ಯಕ್ಷಗಾನಕ್ಕೆ ತಮ್ಮದೇ ಆದ ಚೌಕಟ್ಟೊಂದನ್ನು ರೂಪಿಸಬೇಕು. ಕಾಲಮಿತಿಯ ಬಯಕೆ ಕಾಲದ ಅಪೇಕ್ಷೆ. ಉಳಿದಂತೆ ಯಕ್ಷಗಾನದಲ್ಲಿ ಇನ್ನಷ್ಟು ಬದಲಾವಣೆಗಳು ನಡೆಯಬೇಕು ಎಂದರು.

ಸಾಲಿಗ್ರಾಮದ ಮೇಳದ ಸಂಚಾಲಕ ಕಿಶನ್‌ ಹೆಗ್ಡೆ, ಪೆರ್ಡೂರು ಹಾಗೂ ನೀಲಾವರ ಮೇಳದ ಸಂಚಾಲಕ ಕರುಣಾಕರ ಶೆಟ್ಟಿ , ಕಾಲಮಿತಿಯ ಪ್ರಯೋಗ ಟೆಂಟ್‌ ಮೇಳದಲ್ಲಿ ಕಷ್ಟ. ಬಯಲಾಟದಲ್ಲಿ ಸುಲಭ ಎಂದರು.

ವೇದಿಕೆಯಲ್ಲಿ ಯು. ವಿಜಯರಾಘವ ಪಡ್ವೆಟ್ನಾಯ, ಅಪ್ಪಣ್ಣ ಹೆಗ್ಡೆ ಬಸ್ರೂರು , ಧನಂಜಯ ಶೆಟ್ಟಿ ಮಂದಾರ್ತಿ, ಡಿ. ಹರ್ಷೇ೦ದ್ರ ಕುಮಾರ್‌ ಉಪಸ್ಥಿತರಿದ್ದರು. ಶ್ರೀನಿವಾಸ ರಾವ್‌ ನಿರ್ವಹಿಸಿದರು.

ಅಭಿಪ್ರಾಯಗಳು

  • ಸಂಜೆ 6.30ರಿಂದ ರಾತ್ರಿ 12ಗಂಟೆ ವರೆಗೆ ಪ್ರದರ್ಶನ ಇರಲಿ.
  • ಮೊದಲ 45 ನಿಮಿಷ ಪೂರ್ವರಂಗ ಪ್ರದರ್ಶನ ಇರಲಿ.
  • ಕಲಾವಿದರ ಸಂಕಷ್ಟ ಕುರಿತೂ ಗಮನ ಇರಲಿ.
  • ಕಥಾ ನಿರೂಪಣೆಗೆ ತೊಂದರೆಯಾಗದಂತೆ ಇರಲಿ.
  • ಕಟೀಲು ಮೇಳದ ಆಟ 32 ವರ್ಷಕ್ಕೆ ನೋಂದಣಿ ಆಗಿದ್ದು ಒಂದೇ ದಿನ ಐವರಿಗೂ ಸೇವೆಗೆ ಅವಕಾಶ ನೀಡುವಂತಾಗಲಿ.
  • ಕಲೋಚಿತ, ಕಾಲೋಚಿತ ಬದಲಾವಣೆ ಸ್ವಾಗತಾರ್ಹ.
  • ನವೆಂಬರ್‌ ಹಾಗೂ ಮೇ ತಿಂಗಳಲ್ಲಿ ಕ್ಷೇತ್ರಗಳಲ್ಲಿಯೇ ಪೂರ್ಣರಾತ್ರಿಯ ಪ್ರದರ್ಶನಗಳು ನಡೆಯಲಿ.
  • ದೇವಳದ ವತಿಯಿಂದ ಕಲಾವಿದರನ್ನು ಉದ್ಯೋಗಿಗಳು ಎಂದು ಪರಿಗಣಿಸಿ ಆರ್ಥಿಕ ಭದ್ರತೆ ನೀಡಲಿ.
  • ಅಪೇಕ್ಷಿತರಿಗೆ ಈ ವರ್ಷದಿಂದಲೇ ಕಾಲಮಿತಿ ಯಕ್ಷಗಾನ ಜಾರಿಯಾಗಲಿ.




ಕೃಪೆ : http://udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು




ಪೂರಕ ಲೇಖನಗಳು
     



ತಾಜಾ ಲೇಖನಗಳು
     
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ